‏ Isaiah 12

ಸ್ತೋತ್ರ ಗೀತೆಗಳು

1ಆ ದಿನದಲ್ಲಿ ನೀನು ಹೇಳುವುದೇನೆಂದರೆ: “ಯೆಹೋವ ದೇವರೇ, ನಾನು ನಿಮಗೆ ಕೃತಜ್ಞತೆಯನ್ನು ಸಲ್ಲಿಸುವೆನು;
ನೀವು ನನ್ನ ಮೇಲೆ ಕೋಪಗೊಂಡಿದ್ದರೂ,
ಆ ನಿಮ್ಮ ಕೋಪವು ಪರಿಹಾರವಾಗಿ
ನನ್ನನ್ನು ಸಂತೈಸುತ್ತೀರಲ್ಲವೆ?
2ನಿಜವಾಗಿಯೂ ದೇವರೇ ನನಗೆ ರಕ್ಷಣೆಯು,
ನಾನು ಭರವಸವಿಡುವೆನು ಮತ್ತು ಭಯಪಡೆನು.
ಕರ್ತರಾದ ಯೆಹೋವ ದೇವರೇ ನನ್ನ ಬಲವೂ ನನ್ನ ಕೀರ್ತನೆಯೂ,
ಅವರೇ ನನಗೆ ರಕ್ಷಣೆಯೂ ಆಗಿದ್ದಾರೆ.”
3ರಕ್ಷಣೆಯೆಂಬ ಬಾವಿಗಳಿಂದ ಆನಂದದೊಡನೆ
ನೀವು ನೀರನ್ನು ಸೇದುವಿರಿ.

4ಆ ದಿನದಲ್ಲಿ ನೀವು ಹೀಗೆ ಹೇಳುವಿರಿ, “ಯೆಹೋವ ದೇವರನ್ನು ಕೊಂಡಾಡಿರಿ. ಅವರ ಹೆಸರನ್ನೆತ್ತಿ ಜನರ ಮಧ್ಯದಲ್ಲಿ
ಅವರ ಕ್ರಿಯೆಗಳನ್ನು ಪ್ರಕಟಿಸಿರಿ.
ಅವರ ನಾಮವನ್ನು ಉನ್ನತೋನ್ನತವೆಂದು ಎತ್ತಿ ಹೇಳಿರಿ.
5ಯೆಹೋವ ದೇವರಿಗೆ ಹಾಡಿರಿ.
ಏಕೆಂದರೆ, ಅವರು ಮಹಿಮೆಯ ಕಾರ್ಯಗಳನ್ನು ಮಾಡಿದ್ದಾರೆ.
ಇದು ಭೂಮಂಡಲದಲ್ಲೆಲ್ಲಾ ತಿಳಿದಿರಲಿ.
6ಚೀಯೋನಿನ ನಿವಾಸಿಗಳೇ, ಆರ್ಭಟಿಸಿ ಹರ್ಷಧ್ವನಿಯನ್ನು ಗೈಯಿರಿ.
ಏಕೆಂದರೆ, ಇಸ್ರಾಯೇಲಿನ ಪರಿಶುದ್ಧರು ನಿಮ್ಮ ಮಧ್ಯದಲ್ಲಿ ಮಹತ್ವವುಳ್ಳವರಾಗಿದ್ದಾರೆ.”
Copyright information for KanKSB