Isaiah 15
ಮೋವಾಬಿಗೆ ವಿರುದ್ಧವಾದ ಪ್ರವಾದನೆ
1ಮೋವಾಬಿನ ವಿಷಯವಾದ ಪ್ರವಾದನೆ: ಆ ರಾತ್ರಿಯಲ್ಲಿ ಮೋವಾಬಿನಆರ್ ಪಟ್ಟಣವು ಹಾಳಾಗಿ ನಿಶ್ಶಬ್ದವಾಯಿತು.
ಹೌದು, ಆ ರಾತ್ರಿಯಲ್ಲಿ ಮೋವಾಬಿನ ಕೀರ್ ಪಟ್ಟಣವು
ಹಾಳಾಗಿ ನಿಶ್ಶಬ್ದವಾಯಿತು.
2ದೀಬೋನ್ ಊರಿನವರು ಅಳುವುದಕ್ಕಾಗಿ ಎತ್ತರವಾದ ಪೂಜಾಸ್ಥಳಕ್ಕೆ ಹೋಗಿದ್ದಾರೆ;
ನೆಬೋ ಹಾಗೂ ಮೇದೆಬ ಪಟ್ಟಣದವರಿಗಾಗಿ ಮೋವಾಬ್ಯರು ಗೋಳಾಡುತ್ತಾರೆ.
ಪ್ರತಿಯೊಬ್ಬರ ತಲೆಯು ಬೋಳು,
ಪ್ರತಿಯೊಬ್ಬರ ಗಡ್ಡವೂ ವಿಕಾರವಾಗಿ ಕತ್ತರಿಸಿದೆ.
3ಅವರು ತಮ್ಮ ಬೀದಿಗಳಲ್ಲಿ ಗೋಣಿತಟ್ಟನ್ನು ತಾವೇ ಸುತ್ತಿಕೊಳ್ಳುವರು.
ಪ್ರತಿಯೊಬ್ಬನು ತನ್ನ ಮನೆಯ ಮೇಲೆಯೂ,
ಬೀದಿಗಳಲ್ಲಿಯೂ ಅರಚುತ್ತಾ
ಬಹುಶೋಕದಿಂದ ಗೋಳಾಡುವನು.
4ಹೆಷ್ಬೋನ್ ಮತ್ತು ಎಲೆಯಾಲೆ ಕೂಗುತ್ತವೆ,
ಅವರ ಸ್ವರವು ಯಹಚ ಊರಿನವರೆಗೂ ಕೇಳಿಸುತ್ತದೆ.
ಆದಕಾರಣ ಮೋವಾಬಿನ ಯುದ್ಧಭಟರು ಕಿರಿಚಿಕೊಳ್ಳುವರು.
ಅವರ ಹೃದಯಗಳು ತತ್ತರಿಸುತ್ತವೆ.
5ನನ್ನ ಹೃದಯವು ಮೋವಾಬಿನ ನಿಮಿತ್ತ ಕೂಗುತ್ತದೆ.
ಅಲ್ಲಿಂದ ಪಲಾಯನವಾದವರು ಚೋಗರ್ ಕಡೆಗೂ
ಎಗ್ಲತ್ ಶೆಲಿಶೀಯ ಕಡೆಗೂ ಓಡಿಹೋಗುವರು.
ಲೂಹೀತ್ ದಿಣ್ಣೆಯನ್ನು
ಅಳುತ್ತಾ ಹತ್ತುವರು.
ಏಕೆಂದರೆ ಹೊರೊನಯಿಮ್ ಊರಿನ ದಾರಿಯಲ್ಲಿ ನಡೆಯುತ್ತಾ
ನಾಶವಾದೆವಲ್ಲಾ ಎಂದು ದನಿಗೈಯುವರು.
6ನಿಮ್ರೀಮ್ ಹೊಳೆಯು ಬತ್ತಿಹೋಯಿತು,
ಹಸಿಹುಲ್ಲು ಬಾಡಿತು,
ಮೇವು ತೀರಿತು
ಅಲ್ಲಿ ಹಸಿರಾದದ್ದು ಇಲ್ಲ.
7ಆದಕಾರಣ ತಾವು ಸಂಪಾದಿಸಿದ ಆಸ್ತಿಯನ್ನೂ,
ಕೂಡಿಸಿಟ್ಟ ಸೊತ್ತನ್ನೂ ನೀರವಂಜಿಯ ಹೊಳೆಯ ಆಚೆಗೆ ಹೊತ್ತುಕೊಂಡು ಹೋಗುತ್ತಾರೆ.
8ಅವರ ಕೂಗಾಟವು ಮೋವಾಬಿನ ಎಲೆಗಳ ತನಕ ಹಬ್ಬಿದೆ.
ಅದರ ಕಿರಿಚಾಟ ಎಗ್ಲಯಿಮ್ ಹಾಗೂ
ಬೆಯೆರ್ ಏಲೀಮ್ ಊರುಗಳ ತನಕ ವ್ಯಾಪಿಸಿದೆ.
9ದೀಮೋನ್ ನದಿಯ ನೀರೆಲ್ಲಾ ರಕ್ತವಾಯಿತು.
ದೀಮೋನಿನ ಮೇಲೆ ಹೆಚ್ಚಾದ ಹಾನಿಯನ್ನು ತರುವೆನು.
ಮೋವಾಬ್ಯರಲ್ಲಿ ತಪ್ಪಿಸಿಕೊಂಡವರ ಮೇಲೆಯೂ,
ದೇಶದಲ್ಲಿ ಉಳಿದವರ ಮೇಲೆಯೂ ಸಿಂಹವನ್ನು ಬರಮಾಡುವೆನು.
Copyright information for
KanKSB