‏ Psalms 122

ದಾವೀದನ ಯಾತ್ರಾ ಗೀತೆ.

1“ಯೆಹೋವ ದೇವರ ಆಲಯಕ್ಕೆ ಹೋಗೋಣ,”
ಎಂದು ಜನರು ನನ್ನನ್ನು ಕರೆದಾಗ,
ನನಗೆ ಸಂತೋಷವಾಯಿತು.
2ಯೆರೂಸಲೇಮೇ, ನಮ್ಮ ಪಾದಗಳು
ನಿನ್ನ ಬಾಗಿಲುಗಳಲ್ಲಿ ತಲುಪಿದೆ.

3ಯೆರೂಸಲೇಮು, ಗಂಭೀರವಾಗಿಯೂ
ಗಟ್ಟಿಯಾಗಿಯೂ ಕಟ್ಟಿರುವ ಪಟ್ಟಣವಾಗಿದೆ.
4ಅಲ್ಲಿಗೆ ಗೋತ್ರಗಳು,
ಯೆಹೋವ ದೇವರು
ಇಸ್ರಾಯೇಲಿಗೆ ಕೊಟ್ಟ ಕಟ್ಟಳೆಗಳ ಪ್ರಕಾರ
ಯೆಹೋವ ದೇವರ ಹೆಸರನ್ನು ಕೊಂಡಾಡುವುದಕ್ಕೆ ಗೋತ್ರಗಳು ಯಾತ್ರೆಯಾಗಿ ಬರುತ್ತಿದ್ದವು.
5ಏಕೆಂದರೆ ಅಲ್ಲಿ ನ್ಯಾಯ ನಿರ್ಣಯಕ್ಕೆ ಸಿಂಹಾಸನಗಳೂ,
ಅಂದರೆ, ದಾವೀದನ ಮನೆಯ ಸಿಂಹಾಸನಗಳೂ ಇರುತ್ತವೆ.

6ಯೆರೂಸಲೇಮಿನ ಸಮಾಧಾನಕ್ಕಾಗಿ ಪ್ರಾರ್ಥನೆಮಾಡಿರಿ.
“ಯೆರೂಸಲೇಮೇ, ನಿನ್ನನ್ನು ಪ್ರೀತಿಸುವವರಿಗೆ ಅಭಿವೃದ್ಧಿಯಾಗಲಿ.
7ನಿನ್ನ ಪ್ರಾಕಾರದಲ್ಲಿ ಸಮಾಧಾನವಿರಲಿ,
ನಿನ್ನ ಅರಮನೆಗಳಲ್ಲಿ ಅಭಿವೃದ್ಧಿಯೂ ಇರಲಿ.”
8ನನ್ನ ಸಹೋದರರ ನಿಮಿತ್ತವೂ ನನ್ನ ಸ್ನೇಹಿತರ ನಿಮಿತ್ತವೂ
“ನಿನ್ನಲ್ಲಿ ಸಮಾಧಾನವಿರಲಿ,” ಎಂದು ಈಗ ಹೇಳುತ್ತೇನೆ.
9ನಮ್ಮ ದೇವರಾದ ಯೆಹೋವ ದೇವರ ಆಲಯದ ನಿಮಿತ್ತ
ನಿನಗೆ ಸಮೃದ್ಧಿಯಾಗಲಿ ಎಂದು ಹಾರೈಸುತ್ತೇನೆ.
Copyright information for KanKSB