Psalms 88
ದುಃಖದಲ್ಲಿ ಮುಳುಗಿರುವವನ ಮೊರೆ; ಕೋರಹೀಯರ ಕೀರ್ತನೆ; ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ; ಮಹಲಾತ್ ಎಂಬ ರಾಗದ ಪ್ರಕಾರ ಹಾಡತಕ್ಕದ್ದು. ಮಸ್ಕೀಲ್ ರಾಗದಲ್ಲಿ ಜೇರಹ ಕುಲದವನಾದ ಹೇಮಾನನ ಪದ್ಯ. 1ನನ್ನನ್ನು ರಕ್ಷಿಸುವ ದೇವರಾದ ಯೆಹೋವ ದೇವರೇ,ಹಗಲಿರುಳು ನಿಮ್ಮ ಮುಂದೆ ಮೊರೆಯಿಡುತ್ತೇನೆ.
2ನನ್ನ ಪ್ರಾರ್ಥನೆಯು ನಿಮ್ಮ ಮುಂದೆ ಬರಲಿ.
ನನ್ನ ಮೊರೆಗೆ ನಿಮ್ಮ ಕಿವಿಕೊಡಿರಿ.
3ನನ್ನ ಪ್ರಾಣವು ಕಷ್ಟದಿಂದ ತುಂಬಿದೆ;
ನನ್ನ ಜೀವವು ಸಮಾಧಿಯ ಸಮೀಪಕ್ಕೆ ಎಳೆಯುತ್ತದೆ.
4ಸಮಾಧಿ ಸೇರುವವರ ಸಂಗಡ ಎಣಿಸಲಾಗಿದ್ದೇನೆ;
ನಾನು ಬಲವಿಲ್ಲದ ಪುರುಷನ ಹಾಗಿದ್ದೇನೆ.
5ಹತರಾದವರು ಸಮಾಧಿಯಲ್ಲಿ ಮಲಗಿದಂತೆ
ನಾನೂ ಸತ್ತವರೊಂದಿಗೆ ಸೇರಿರುತ್ತೇನೆ.
ಅವರನ್ನು ನೀನೆಂದೂ ಜ್ಞಾಪಿಸಿಕೊಳ್ಳುವುದಿಲ್ಲ.
ನಿಮ್ಮ ಪರಿಪಾಲನೆಯಿಂದ ದೂರವಾಗಿದ್ದಾರೆ.
6ಅಧೋಲೋಕದಲ್ಲಿಯೂ ಗಾಡಾಂಧಕಾರದಲ್ಲಿಯೂ
ಅಗಾಧಗಳಲ್ಲಿಯೂ ನನ್ನನ್ನು ಇಟ್ಟಿದ್ದೀರಿ.
7ನಿಮ್ಮ ಬೇಸರವು ನನ್ನ ಮೇಲೆ ಭಾರವಾಗಿದೆ.
ನಿಮ್ಮ ಅಲೆಗಳಿಂದೆಲ್ಲಾ ನನ್ನನ್ನು ಮುಳುಗಿಸಿದ್ದೀರಿ.
8ನನ್ನ ಪರಿಚಿತರನ್ನು ನನ್ನಿಂದ ದೂರಮಾಡಿದ್ದೀರಿ.
ನಾನು ಅವರಿಗೆ ಬೇಡವಾಗಿದ್ದೇನೆ.
ನಾನು ಬಂಧಿತನಾಗಿದ್ದೇನೆ, ಹೊರಗೆ ಬರಲಾರೆನು.
9ಬಾಧೆಯ ದೆಸೆಯಿಂದ ನನ್ನ ಕಣ್ಣು ಮಂದವಾಗಿ ಹೋಗಿದೆ.
ಯೆಹೋವ ದೇವರೇ, ದಿನವೆಲ್ಲಾ ನಿಮ್ಮನ್ನು ಕರೆಯುತ್ತೇನೆ.
ನಾನು ನಿಮ್ಮ ಕಡೆಗೆ ನನ್ನ ಕೈಗಳನ್ನು ಚಾಚುತ್ತೇನೆ.
10ಸತ್ತವರಿಗೆ ಅದ್ಭುತಗಳನ್ನು ತೋರಿಸುವಿರೋ?
ಸತ್ತವರು ಎದ್ದು ನಿಮ್ಮನ್ನು ಕೊಂಡಾಡುವರೋ?
11ಸಮಾಧಿಯಲ್ಲಿ ನಿಮ್ಮ ಪ್ರೀತಿ ಸಾರಲಾಗುವುದೇ?
ನಾಶನ ಸ್ಥಳದಲ್ಲಿ ನಿಮ್ಮ ನಂಬಿಗಸ್ತಿಕೆಯು ಹೇಳಲಾಗುವುದೋ?
12ಕತ್ತಲೆಯಲ್ಲಿ ನಿಮ್ಮ ಅದ್ಭುತಗಳೂ ಮರೆತುಹೋಗಿರುವ ದೇಶದಲ್ಲಿ
ನಿಮ್ಮ ನೀತಿಯೂ ತಿಳಿಯಲಾಗುವುದೋ?
13ಆದರೆ ನಾನು ಯೆಹೋವ ದೇವರೇ, ನಿಮ್ಮ ಕಡೆಗೆ ಮೊರೆಯಿಡುತ್ತೇನೆ.
ಉದಯಕಾಲದಲ್ಲಿ ನನ್ನ ಪ್ರಾರ್ಥನೆಯು ನಿಮ್ಮನ್ನು ಎದುರುಗೊಳ್ಳುವುದು.
14ಯೆಹೋವ ದೇವರೇ, ನೀವೇಕೆ ನನ್ನನ್ನು ತಳ್ಳಿಬಿಟ್ಟಿದ್ದೀರಿ.
ನನಗೆ ನಿಮ್ಮ ಮುಖ ಮರೆಮಾಡುತ್ತೀರಿ?
15ಬಾಲ್ಯದಿಂದಲೂ ನಾನು ಬಾಧಿತನು ಸಾಯುವುದಕ್ಕೆ ಸಿದ್ಧನೂ ಆಗಿದ್ದೇನೆ.
ನಿಮ್ಮ ದಂಡನೆಯನ್ನು ನಾನು ತಾಳುತ್ತಾ ಭ್ರಮೆಗೊಳ್ಳುತ್ತೇನೆ.
16ನನ್ನ ಮೇಲೆ ನಿಮ್ಮ ಬೇಸರವು ಆವರಿಸಿದೆ.
ನಿಮ್ಮ ದಂಡನೆಗಳು ನನ್ನನ್ನು ಬಾಧಿಸಿರುತ್ತವೆ.
17ಪ್ರವಾಹಗಳ ಹಾಗೆ ಅವು ಬಂದು ನನ್ನನ್ನು ದಿನವೆಲ್ಲಾ ಸುತ್ತಿಕೊಳ್ಳುತ್ತವೆ;
ಅವು ಸಂಪೂರ್ಣವಾಗಿ ನನ್ನನ್ನು ಮುತ್ತಿಕೊಳ್ಳುತ್ತವೆ.
18ನನ್ನ ಆಪ್ತಮಿತ್ರರನ್ನು ದೂರ ಮಾಡಿದಿರಿ.
ಅಂಧಕಾರವೇ ನನ್ನ ಪರಿಚಯವು.
Copyright information for
KanKSB