‏ Psalms 101

ದಾವೀದನ ಕೀರ್ತನೆ.

1ನಿಮ್ಮ ಪ್ರೀತಿ ನೀತಿಗಳನ್ನು ಕುರಿತು ಹಾಡುವೆನು;
ಯೆಹೋವ ದೇವರೇ, ನಿಮ್ಮನ್ನು ಸ್ತುತಿಸುವೆನು.
2ದೋಷರಹಿತ ಮಾರ್ಗದಲ್ಲಿ ನಡೆಯಲು ಜಾಗರೂಕನಾಗಿರುವೆನು;
ನೀವು ಯಾವಾಗ ನನ್ನ ಬಳಿಗೆ ಬರುವಿರಿ?

ನಾನು ನಿರ್ದೋಷ ಹೃದಯದಿಂದ
ನನ್ನ ಮನೆಯೊಳಗೆ ನಡೆದುಕೊಳ್ಳುವೆನು.
3ನಾನು ಕೆಟ್ಟ ಕಾರ್ಯವನ್ನು
ನನ್ನ ಕಣ್ಣುಗಳ ಮುಂದೆ ಒಪ್ಪಿಗೆಯಿಂದ ನೋಡುವುದಿಲ್ಲ.

ಅವಿಶ್ವಾಸಿಗಳು ಮಾಡುವುದನ್ನು ದ್ವೇಷಿಸುವೆನು;
ಅದರಲ್ಲಿ ನಾನು ಭಾಗವಹಿಸುವುದಿಲ್ಲ.
4ಮೂರ್ಖಜನರು ನನ್ನಿಂದ ದೂರವಿರುವರು;
ದುಷ್ಟತನವನ್ನು ಅರಿಯದಿರುವೆನು.

5ಮರೆಯಾಗಿ ನೆರೆಯವನ ಮೇಲೆ
ಚಾಡಿ ಹೇಳುವವನನ್ನು ಸುಮ್ಮನಿರಿಸುವೆನು;
ಗರ್ವದ ಕಣ್ಣೂ, ಅಹಂಕಾರದ ಹೃದಯವೂ
ಉಳ್ಳವನನ್ನು ಸಹಿಸಲಾರೆನು.

6ದೇಶದಲ್ಲಿರುವ ನಂಬಿಗಸ್ತರನ್ನು ಆರಿಸಿಕೊಳ್ಳುವೆನು;
ಅವರೇ ನನ್ನ ಸನ್ನಿಧಿಯಲ್ಲಿ ವಾಸಿಸಬೇಕು;
ನಿಷ್ಕಳಂಕವಾಗಿ ನಡೆಯುವವರೇ
ನನ್ನ ಸೇವೆಯಲ್ಲಿರಬೇಕು.

7ಮೋಸ ಮಾಡುವವನು ನನ್ನ ಮನೆಯೊಳಗೆ ವಾಸಮಾಡನು;
ಸುಳ್ಳಾಡುವವನು ನನ್ನ ಕಣ್ಣುಗಳ ಮುಂದೆ ನಿಂತುಕೊಳ್ಳನು.

8ದುಷ್ಟತನ ಮಾಡುವವರೆಲ್ಲರನ್ನು
ಪ್ರತಿ ಮುಂಜಾನೆ ನಿಲ್ಲಿಸಿಬಿಡುವೆನು;
ಯೆಹೋವ ದೇವರ ಪಟ್ಟಣದೊಳಗಿಂದ
ಪ್ರತಿಯೊಬ್ಬ ದುಷ್ಟನನ್ನು ಹೊರಗೆ ಹಾಕುವೆನು.
Copyright information for KanKSB