‏ Psalms 149

1ಯೆಹೋವ ದೇವರನ್ನು ಸ್ತುತಿಸಿರಿ.

ಯೆಹೋವ ದೇವರಿಗೆ ಹೊಸಹಾಡನ್ನು ಹಾಡಿರಿ,
ಭಕ್ತರ ಸಭೆಯಲ್ಲಿ ದೇವರ ಸ್ತೋತ್ರವನ್ನೂ ಹಾಡಿರಿ.

2ಇಸ್ರಾಯೇಲು ತನ್ನನ್ನು ಉಂಟುಮಾಡಿದ ದೇವರಲ್ಲಿ ಸಂತೋಷಿಸಲಿ;
ಚೀಯೋನಿನ ಜನರು ತಮ್ಮ ಅರಸರಲ್ಲಿ ಉಲ್ಲಾಸಿಸಲಿ.
3ದೇವರ ಹೆಸರನ್ನು ನರ್ತಿಸುತ್ತಾ ಸ್ತುತಿಸಲಿ;
ದಮ್ಮಡಿಯಿಂದಲೂ ಕಿನ್ನರಿಯಿಂದಲೂ ದೇವರನ್ನು ಕೀರ್ತಿಸಲಿ.
4ಏಕೆಂದರೆ ಯೆಹೋವ ದೇವರು ತಮ್ಮ ಜನರಲ್ಲಿ ಹರ್ಷಿಸುತ್ತಾರೆ.
ದೀನರನ್ನು ಜಯದ ಕಿರೀಟದಿಂದ ಅಲಂಕರಿಸುತ್ತಾರೆ.
5ಇಂಥಾ ಸನ್ಮಾನದಲ್ಲಿ ನಂಬಿಗಸ್ತರು ಸಂತೋಷಪಡಲಿ
ಹಾಸಿಗೆಯಲ್ಲಿರುವಾಗಲೂ ಆನಂದಗಾನ ಹಾಡಲಿ.

6ಉನ್ನತ ದೇವರ ಸ್ತೋತ್ರವು ಅವರ ಬಾಯಿಯಲ್ಲಿ ಇರಲಿ.
ಇಬ್ಬಾಯಿ ಖಡ್ಗ ಅವರ ಕೈಯಲ್ಲಿಯೂ ಇರಲಿ.
7ಜನಾಂಗಗಳಲ್ಲಿ ನ್ಯಾಯ ಪ್ರತೀಕಾರವಾಗಲಿ,
ಅಪರಾಧಿಗಳಿಗೆ ಶಿಕ್ಷೆಯಾಗಲಿ.
8ಅಪರಾಧದ ಅರಸರನ್ನು ಸಂಕೋಲೆಗಳಿಂದಲೂ,
ಪ್ರಮುಖರನ್ನು ಕಬ್ಬಿಣದ ಬೇಡಿಗಳಿಂದಲೂ ಬಂಧಿಸಲಿ.
9ಬರೆದಿರುವ ನ್ಯಾಯವಿಧಿಯು ಅವರಲ್ಲಿ ನೆರವೇರಲಿ,
ದೇವರ ಭಕ್ತರೆಲ್ಲರಿಗೆ ಈ ಗೌರವವಿರುತ್ತದೆ.

ಯೆಹೋವ ದೇವರನ್ನು ಸ್ತುತಿಸಿರಿ.
Copyright information for KanKSB