Psalms 58
ಸಂಗೀತ ನಿರ್ದೇಶಕನಿಗಾಗಿರುವ ಕೀರ್ತನೆ. ಅಲ್ತಷ್ಖೇತೆಂಬ ರಾಗವನ್ನು ಆಧರಿಸಿದೆ. ದಾವೀದನ ಮಿಕ್ಟಮ್ ಹಾಡಿನ ಸಂಯೋಜನೆ. ದಾವೀದನ ಕೀರ್ತನೆ. 1ಜನನಾಯಕರೇ, ನೀವು ನ್ಯಾಯವಾಗಿ ತೀರ್ಪನ್ನು ನುಡಿಯುತ್ತೀರೋ?ಜನರಲ್ಲಿ ನೀವು ಯಥಾರ್ಥವಾಗಿ ನ್ಯಾಯತೀರಿಸುವಿರೋ?
2ಇಲ್ಲಾ, ನಿಮ್ಮ ಹೃದಯದಲ್ಲಿ ದುಷ್ಟತನವನ್ನು ಕಲ್ಪಿಸುತ್ತೀರಲ್ಲಾ,
ದೇಶದಲ್ಲಿ ನಿಮ್ಮ ಕೈಗಳಿಂದ ಹಿಂಸಾಚಾರವನ್ನು ತೂಗುತ್ತೀರಲ್ಲಾ.
3ದುಷ್ಟರು ಗರ್ಭದಿಂದಲೇ ದಾರಿತಪ್ಪುತ್ತಾರೆ.
ಹುಟ್ಟಿದಂದಿನಿಂದಲೇ ಸುಳ್ಳಾಡುವವರಾಗಿ ತಪ್ಪಿಹೋಗುತ್ತಾರೆ.
4ಹಾವಿನ ವಿಷದ ಹಾಗೆ ಅವರಲ್ಲಿ ವಿಷ ಇದೆ.
ಘಟಸರ್ಪದ ಹಾಗೆ ಮಂದವಾಗಿದ್ದಾರೆ.
5ಚಮತ್ಕಾರದಿಂದ ಆಕರ್ಷಿಸಿ,
ಕೌಶಲ್ಯದಿಂದ ನುಡಿಸುವ ಹಾವಾಡಿಗನ ನಾದವನ್ನು ಕೇಳದ ಹಾವಿನಂತೆ ಇದ್ದಾರೆ.
6ಓ, ದೇವರೇ, ಅವರ ಹಲ್ಲುಗಳು ಮುರಿದು ಬೀಳಲಿ.
ಯೆಹೋವ ದೇವರೇ, ಪ್ರಾಯದ ಸಿಂಹಗಳಂತಿರುವ ಅವರ ಕೋರೆಹಲ್ಲುಗಳು ನಾಶವಾಗಲಿ.
7ಅವರು ನೀರಿನಂತೆ ಕರಗಿಹೋಗಲಿ.
ಅವರು ತಮ್ಮ ಬಾಣಗಳನ್ನು ಗುರಿಯಿಡುವಾಗ ಡೊಂಕಾಗಿ ಹೋಗಲಿ.
8ಕರಗುವ ಗೊಂಡೆ ಹುಳದಂತೆ ಅವರು ನಾಶವಾಗಲಿ.
ದಿನತುಂಬದೆ ಹುಟ್ಟಿದ ಶಿಶುವಿನಂತೆ ಅವರು ಸೂರ್ಯನನ್ನು ಕಾಣದಿರಲಿ.
9ಗಡಿಗೆಗಳು ಮುಳ್ಳಿನ ಬೆಂಕಿಯ ಶಾಖವನ್ನು ಇನ್ನೂ
ಹಸಿಯಾಗಿ ಇಲ್ಲವೆ ಒಣಗಿರುವಾಗಲೇ, ಬಿರುಗಾಳಿ ಹಾರಿಸಿಬಿಡುವಂತೆ ಅವರಿಗೆ ಆಗಲಿ.
10ನೀತಿವಂತರು ದುಷ್ಟರಿಗಾಗುವ ಪ್ರತಿದಂಡನೆಯನ್ನು ಕಂಡು ಹಿಗ್ಗಿ
ತಮ್ಮ ಪಾದಗಳನ್ನು ದುಷ್ಟನ ರಕ್ತದ ಮೇಲಿಡಲಿ.
11ಆಗ ಜನರು ಹೀಗೆ ಹೇಳಿಕೊಳ್ಳುವರು,
“ನಿಶ್ಚಯವಾಗಿ ನೀತಿವಂತನಿಗೆ ಫಲವಿದೆ.
ನಿಶ್ಚಯವಾಗಿ ಭೂಮಿಯಲ್ಲಿ ನ್ಯಾಯತೀರಿಸುವ ದೇವರು ಇದ್ದಾರೆ.”
Copyright information for
KanKSB