‏ 1 Kings 10:1-13

ಶೆಬದ ರಾಣಿ ಸೊಲೊಮೋನನನ್ನು ಸಂದರ್ಶಿಸಿದ್ದು

1ಶೆಬದ ರಾಣಿಯು ಯೆಹೋವ ದೇವರ ನಾಮದ ಮಹತ್ತಿನಿಂದ ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು. 2ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು. 3ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು. ಅವುಗಳಲ್ಲಿ ಅರಸನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು. 4ಶೆಬದ ರಾಣಿಯು ಸೊಲೊಮೋನನ ಸಮಸ್ತ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ, 5ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು.

6ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ. 7ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ಇದರಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಿನ್ನ ಜ್ಞಾನವೂ, ನಿನ್ನ ಸಂಪತ್ತೂ ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ. 8ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು. 9ಇಸ್ರಾಯೇಲಿನ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ಯೆಹೋವ ದೇವರು ಯುಗಯುಗಕ್ಕೂ ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು.

10ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟ ಅಪರಿಮಿತವಾದ ಸುಗಂಧದ್ರವ್ಯಗಳ ಹಾಗೆ ಬೇರೆ ಯಾರೂ ಕೊಟ್ಟಿರಲಿಲ್ಲ.

11ಹೀರಾಮನ ಹಡಗುಗಳು ಓಫೀರನಿಂದ ಬಂಗಾರ ಮಾತ್ರವಲ್ಲದೆ ಅನೇಕ ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದವು. 12ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ ಅರಮನೆಗೋಸ್ಕರವೂ ಸ್ತಂಭಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ, ವೀಣೆಗಳನ್ನೂ ಮಾಡಿಸಿದನು. ಅಂದಿನಿಂದ ಈ ದಿನದವರೆಗೂ ಅಂಥಾ ಸುಗಂಧದ ಮರಗಳು ಬಂದದ್ದೂ ಇಲ್ಲ, ಕಂಡದ್ದೂ ಇಲ್ಲ.

13ಅರಸನಾದ ಸೊಲೊಮೋನನು ಶೆಬದ ರಾಣಿಗೆ ಔದಾರ್ಯವಾಗಿ ಕೊಟ್ಟ ಕಾಣಿಕೆಗಳ ಹೊರತಾಗಿ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು.
Copyright information for KanKSB