2 Chronicles 9:1-12
ಶೆಬ ದೇಶದ ರಾಣಿ ಸೊಲೊಮೋನನನ್ನು ಸಂದರ್ಶಿಸಿದ್ದು
1ಶೆಬದ ರಾಣಿಯು ಸೊಲೊಮೋನನ ಕೀರ್ತಿಯನ್ನು ಕೇಳಿದಾಗ, ಒಗಟುಗಳಿಂದ ಅವನನ್ನು ಪರೀಕ್ಷಿಸಲು ಬಂದಳು. ಅವಳು ಮಹಾ ಗುಂಪಿನ ಸಂಗಡ ಸುಗಂಧದ್ರವ್ಯಗಳನ್ನೂ, ಬಹಳಷ್ಟು ಬಂಗಾರವನ್ನೂ, ಅಮೂಲ್ಯವಾದ ರತ್ನಗಳನ್ನೂ ಹೊತ್ತುಕೊಂಡಿರುವ ಒಂಟೆಗಳ ಸಂಗಡ ಯೆರೂಸಲೇಮಿಗೆ ಬಂದಳು. ಅವಳು ಸೊಲೊಮೋನನ ಬಳಿಗೆ ಬಂದ ಮೇಲೆ, ತನ್ನ ಹೃದಯದಲ್ಲಿದ್ದ ಎಲ್ಲವನ್ನು ಕುರಿತು ಅವನ ಸಂಗಡ ಮಾತನಾಡಿದಳು. 2ಆಗ ಸೊಲೊಮೋನನು ಅವಳ ಪ್ರಶ್ನೆಗಳಿಗೆಲ್ಲಾ ಉತ್ತರಿಸಿದನು, ಅವುಗಳಲ್ಲಿ ಅವನಿಗೆ ತಿಳಿಯದಂಥದ್ದು ಒಂದೂ ಇರಲಿಲ್ಲವಾದ್ದರಿಂದ ಎಲ್ಲವುಗಳಿಗೂ ಉತ್ತರಿಸಿದನು. 3ಶೆಬದ ರಾಣಿಯು ಸೊಲೊಮೋನನ ಜ್ಞಾನವನ್ನೂ, ಅವನು ಕಟ್ಟಿಸಿದ ಅರಮನೆಯನ್ನೂ, 4ಅವನ ಮೇಜಿನ ಭೋಜನವನ್ನೂ, ಅವನ ಅಧಿಪತಿಗಳು ಕುಳಿತಿರುವ ರೀತಿಯನ್ನೂ, ಅವನ ಸೇವಕರು ನಿಂತಿರುವುದನ್ನೂ, ಅವರ ವಸ್ತ್ರಗಳನ್ನೂ, ಅವನ ಪಾನದಾಯಕರನ್ನೂ ಅವರ ವಸ್ತ್ರಗಳನ್ನೂ, ಅವನು ಯೆಹೋವ ದೇವರ ಆಲಯದಲ್ಲಿ ಅರ್ಪಿಸಿದ ದಹನಬಲಿಗಳನ್ನೂ ಕಂಡಾಗ ಅವಳು ವಿಸ್ಮಯಗೊಂಡಳು. 5ಅವಳು ಅರಸನಿಗೆ, “ನಾನು ನನ್ನ ದೇಶದಲ್ಲಿ ನಿನ್ನ ಸಾಧನೆಗಳ ಕುರಿತೂ, ನಿನ್ನ ಜ್ಞಾನವನ್ನು ಕುರಿತೂ ಕೇಳಿದ ಮಾತು ಸತ್ಯ. 6ಆದರೆ ನಾನು ಬಂದು ನನ್ನ ಕಣ್ಣುಗಳಿಂದ ನೋಡುವವರೆಗೂ ಜನರ ಮಾತುಗಳನ್ನು ನಂಬದೆ ಹೋದೆನು. ಜನರು ನನಗೆ ನಿನ್ನ ಮಹಾಜ್ಞಾನದಲ್ಲಿ ಅರ್ಧವನ್ನಾದರೂ ಹೇಳಲಿಲ್ಲ. ನಾನು ಕೇಳಿದ್ದಕ್ಕಿಂತ ನಿನ್ನ ಕೀರ್ತಿ ಎಷ್ಟೋ ಅಧಿಕವಾಗಿದೆ. 7ನಿನ್ನ ಜನರು ಭಾಗ್ಯವಂತರು. ನಿನ್ನ ಮುಂದೆ ಯಾವಾಗಲೂ ನಿಂತು ನಿನ್ನ ಜ್ಞಾನವನ್ನು ಕೇಳುವ ಈ ನಿನ್ನ ಅಧಿಪತಿಗಳು ಭಾಗ್ಯವಂತರು. 8ನಿನ್ನ ದೇವರಾದ ಯೆಹೋವ ದೇವರಿಗೋಸ್ಕರ ಅರಸನಾಗಿರುವಂತೆ ತಮ್ಮ ಸಿಂಹಾಸನದ ಮೇಲೆ ನಿನ್ನನ್ನು ಕುಳ್ಳಿರಿಸಿದ ನಿನ್ನಲ್ಲಿ ಹರ್ಷಗೊಂಡ ನಿನ್ನ ದೇವರಾದ ಯೆಹೋವ ದೇವರಿಗೆ ಸ್ತೋತ್ರವಾಗಲಿ. ನಿನ್ನ ದೇವರು ಇಸ್ರಾಯೇಲರನ್ನು ಪ್ರೀತಿಮಾಡಿದ್ದರಿಂದ ಅವರನ್ನು ಯುಗಯುಗಕ್ಕೂ ಸ್ಥಿರಗೊಳಿಸಬೇಕೆಂದಿದ್ದಾರೆ. ನ್ಯಾಯವನ್ನೂ, ನೀತಿಯನ್ನೂ ನಡೆಸಲು ಅವರು ನಿನ್ನನ್ನು ಅರಸನನ್ನಾಗಿ ಮಾಡಿದರು,” ಎಂದಳು. 9ಅವಳು ಅರಸನಿಗೆ ನಾಲ್ಕು ಸಾವಿರ ಕಿಲೋಗ್ರಾಂ ತೂಕ ಬಂಗಾರವನ್ನೂ, ಬಹು ಸಮೃದ್ಧಿಯಾದ ಸುಗಂಧದ್ರವ್ಯಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ಕೊಟ್ಟಳು. ಶೆಬದ ರಾಣಿಯು ಅರಸನಾದ ಸೊಲೊಮೋನನಿಗೆ ಕೊಟ್ಟಂಥ ಸುಗಂಧದ್ರವ್ಯಗಳಿಗೆ ಬೇರೆ ಯಾವುದು ಸಮನವಾದದ್ದು ಇರಲಿಲ್ಲ. 10ಹೀರಾಮನ ಸೇವಕರೂ, ಸೊಲೊಮೋನನ ಸೇವಕರೂ ಓಫೀರಿನಿಂದ ಬಂಗಾರವನ್ನೂ, ಸುಗಂಧದ ಮರಗಳನ್ನೂ, ಅಮೂಲ್ಯವಾದ ರತ್ನಗಳನ್ನೂ ತಂದರು. 11ಅರಸನು ಆ ಸುಗಂಧದ ಮರಗಳಿಂದ ಯೆಹೋವ ದೇವರ ಆಲಯಕ್ಕೋಸ್ಕರವೂ, ಅರಮನೆಗೋಸ್ಕರವೂ ಸೋಪಾನಗಳನ್ನು ಮಾಡಿಸಿದನು. ಇದಲ್ಲದೆ ಅವುಗಳಿಂದ ಹಾಡುವವರಿಗೋಸ್ಕರ ಕಿನ್ನರಿಗಳನ್ನೂ ವೀಣೆಗಳನ್ನೂ ಮಾಡಿಸಿದನು. ಯೆಹೂದ ದೇಶದಲ್ಲಿ ಹಿಂದೆಂದೂ ಇಂಥವುಗಳನ್ನು ಕಂಡಿರಲಿಲ್ಲ. 12ಅರಸನಾದ ಸೊಲೊಮೋನನು, ಶೆಬದ ರಾಣಿಯು ಅರಸನಿಗೆ ತಂದ ಕಾಣಿಕೆಗಳ ಪ್ರತಿಯಾಗಿ ಕೊಟ್ಟದ್ದಲ್ಲದೆ, ಅವಳು ಬಯಸಿ ಕೇಳಿದ್ದನ್ನೆಲ್ಲಾ ಅವಳಿಗೆ ಕೊಟ್ಟನು. ಅನಂತರ ಅವಳು ತನ್ನ ಸೇವಕರೊಡನೆ ತಿರುಗಿ ತಮ್ಮ ದೇಶಕ್ಕೆ ಹೋದಳು.
Copyright information for
KanKSB