‏ Genesis 4:2-15

2ಅನಂತರ ಆಕೆಯು ಅವನ ತಮ್ಮನಾದ ಹೇಬೆಲನನ್ನು ಹೆತ್ತಳು.

ಹೇಬೆಲನು ಕುರಿ ಕಾಯುವವನಾದನು ಮತ್ತು ಕಾಯಿನನು ವ್ಯವಸಾಯ ಮಾಡುವವನಾದನು.
3ಸ್ವಲ್ಪ ಕಾಲದ ತರುವಾಯ, ಕಾಯಿನನು ಹೊಲದ ಬೆಳೆಯಲ್ಲಿ ಕೆಲವನ್ನು ತಂದು, ಯೆಹೋವ ದೇವರಿಗೆ ಕಾಣಿಕೆಯಾಗಿ ಸಮರ್ಪಿಸಿದನು. 4ಹೇಬೆಲನು ಸಹ ತನ್ನ ಹಿಂಡಿನಿಂದ ಚೊಚ್ಚಲ ಕುರಿಗಳನ್ನೂ ಅವುಗಳ ಕೊಬ್ಬನ್ನೂ ತಂದನು. ಯೆಹೋವ ದೇವರು ಹೇಬೆಲನನ್ನೂ ಅವನ ಕಾಣಿಕೆಯನ್ನೂ ಮೆಚ್ಚಿಕೊಂಡರು. 5ಆದರೆ ಕಾಯಿನನನ್ನೂ ಅವನ ಕಾಣಿಕೆಯನ್ನೂ ದೇವರು ಮೆಚ್ಚಲಿಲ್ಲ. ಆದ್ದರಿಂದ ಕಾಯಿನನು ಬಹು ಕೋಪಗೊಂಡನು. ಅವನ ಮುಖವು ಬಾಡಿತು.

6ಆಗ ಯೆಹೋವ ದೇವರು ಕಾಯಿನನಿಗೆ, “ನೀನು ಕೋಪಗೊಂಡಿದ್ದೇಕೆ? ಏಕೆ ನಿನ್ನ ಮುಖವು ಬಾಡಿದೆ? 7ನೀನು ಒಳ್ಳೆಯದನ್ನು ಮಾಡಿದರೆ, ನೀನು ಸ್ವೀಕಾರವಾಗುತ್ತಿದ್ದೆ ಅಲ್ಲವೇ? ನೀನು ಒಳ್ಳೆಯದನ್ನು ಮಾಡದೆ ಹೋದರೆ, ಬಾಗಿಲಲ್ಲಿ ಪಾಪವು ಹೊಂಚಿಕೊಂಡಿರುವುದು ಮತ್ತು ಅದು ನಿನ್ನನ್ನು ನುಂಗಲು ಬಯಸುತ್ತದೆ. ಆದರೂ ನೀನು ಅದರ ಮೇಲೆ ಅಧಿಕಾರ ಮಾಡಬೇಕು,” ಎಂದು ಹೇಳಿದರು.

8ಅನಂತರ ಕಾಯಿನನು, “ಅಡವಿಗೆ ಹೋಗೋಣ ಬಾ,” ಎಂದು ತನ್ನ ತಮ್ಮನಿಗೆ ಹೇಳಿದನು. ಅವರು ಅಲ್ಲಿ ಬಂದಾಗ ಕಾಯಿನನು ತನ್ನ ತಮ್ಮ ಹೇಬೆಲನ ಮೇಲೆ ದಾಳಿಮಾಡಿ, ಅವನನ್ನು ಕೊಂದುಹಾಕಿದನು.

9ಯೆಹೋವ ದೇವರು ಕಾಯಿನನನ್ನು, “ನಿನ್ನ ತಮ್ಮ ಹೇಬೆಲನು ಎಲ್ಲಿ?” ಎಂದು ಕೇಳಲು,

ಅವನು, “ನಾನರಿಯೆ. ನಾನು ನನ್ನ ತಮ್ಮನನ್ನು ಕಾಯುವವನೋ?” ಎಂದು ಉತ್ತರಕೊಟ್ಟನು.

10ಅದಕ್ಕೆ ಯೆಹೋವ ದೇವರು, “ನೀನು ಏನು ಮಾಡಿದೆ? ನಿನ್ನ ತಮ್ಮನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ. 11ನೀನು ಈಗ ಶಾಪಗ್ರಸ್ತನಾಗಿದ್ದಿ. ನೀನು ಸುರಿಸಿದ ನಿನ್ನ ತಮ್ಮನ ರಕ್ತವನ್ನು ಸ್ವೀಕರಿಸಲು ಬಾಯಿತೆರೆದಿರುವ ಭೂಮಿಯಿಂದ ತಿರಸ್ಕಾರವಾಗಿದ್ದಿ. 12ನೀನು ಭೂಮಿಯನ್ನು ವ್ಯವಸಾಯ ಮಾಡಿದರೂ ಅದು ಇನ್ನು ಮುಂದೆ ಫಲಿಸುವುದಿಲ್ಲ. ನೀನು ಭೂಲೋಕದಲ್ಲಿ ಅಲೆಮಾರಿಯಾಗಿ ತಿರುಗುವವನು ಆಗಿರುವೆ,” ಎಂದರು.

13ಆಗ ಕಾಯಿನನು ಯೆಹೋವ ದೇವರಿಗೆ, “ನನ್ನ ಶಿಕ್ಷೆಯು ತಾಳಲಾರದಷ್ಟು ದೊಡ್ಡದಾಗಿದೆ. 14ಇಗೋ, ನೀವು ಈ ದಿನ ನನ್ನನ್ನು ಸ್ವದೇಶದಿಂದ ಓಡಿಸುತ್ತಿದ್ದೀರಲ್ಲಾ! ನಿಮ್ಮ ಸಮ್ಮುಖದಿಂದ ನಾನು ಮರೆಯಾಗಿರಬೇಕಾಯಿತು. ಭೂಮಿಯಲ್ಲಿ ಅಲೆಮಾರಿಯಾಗಿರಬೇಕು. ಇದಲ್ಲದೆ ನನ್ನನ್ನು ಕಂಡವರು ಕೊಲ್ಲುವರು,” ಎಂದನು.

15ಆದ್ದರಿಂದ ಯೆಹೋವ ದೇವರು ಅವನಿಗೆ, “ಹಾಗಲ್ಲ, ಕಾಯಿನನನ್ನು ಕೊಲ್ಲುವವನ ಮೇಲೆ ಏಳರಷ್ಟು ಪ್ರತೀಕಾರವಿರುವುದು,” ಎಂದು ಹೇಳಿದರು. ಕಾಯಿನನನ್ನು ಕಂಡವರು ಕೊಲ್ಲದ ಹಾಗೆ ಯೆಹೋವ ದೇವರು ಅವನ ಮೇಲೆ ಒಂದು ಗುರುತನ್ನು ಇಟ್ಟರು.
Copyright information for KanKSB