‏ John 7:53

53 ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.

‏ John 8:1-11

1ಯೇಸುವಾದರೋ ಓಲಿವ್ ಮರಗಳ ಗುಡ್ಡಕ್ಕೆ ಹೋದರು.

2 ಬೆಳಿಗ್ಗೆ ಯೇಸು ತಿರುಗಿ ದೇವಾಲಯಕ್ಕೆ ಬಂದಾಗ ಎಲ್ಲಾ ಜನರು ಅವರ ಬಳಿಗೆ ಬಂದರು. ಯೇಸು ಕುಳಿತುಕೊಂಡು ಅವರಿಗೆ ಬೋಧಿಸಿದರು. 3ಆಗ ವ್ಯಭಿಚಾರದಲ್ಲಿ ಸಿಕ್ಕಿದ ಒಬ್ಬ ಸ್ತ್ರೀಯನ್ನು ನಿಯಮ ಬೋಧಕರು ಮತ್ತು ಫರಿಸಾಯರು ಹಿಡಿದು ಯೇಸುವಿನ ಬಳಿಗೆ ತಂದು ಆಕೆಯನ್ನು ನಡುವೆ ನಿಲ್ಲಿಸಿದರು. 4ಅವರು ಯೇಸುವಿಗೆ, “ಬೋಧಕರೇ, ಈ ಸ್ತ್ರೀ ವ್ಯಭಿಚಾರ ಮಾಡುವಾಗಲೇ ಸಿಕ್ಕಿಬಿದ್ದಳು. 5ಇಂಥವರನ್ನು ಕಲ್ಲೆಸೆದು ಕೊಲ್ಲಬೇಕೆಂದು ಮೋಶೆಯು ನಿಯಮದಲ್ಲಿ ನಮಗೆ ಆಜ್ಞಾಪಿಸಿದ್ದಾನೆ. ಆದ್ದರಿಂದ ನೀವು ಏನು ಹೇಳುತ್ತೀರಿ?” ಎಂದು ಕೇಳಿದರು. 6ಅವರು ಯೇಸುವನ್ನು ಮಾತಿನಲ್ಲಿ ಸಿಕ್ಕಿಸಿ ತಪ್ಪು ಹೊರಿಸಬೇಕೆಂದೇ ಹೀಗೆ ಕೇಳಿದರು.

ಆದರೆ ಯೇಸು ಬಗ್ಗಿಕೊಂಡು ಬೆರಳಿನಿಂದ ನೆಲದ ಮೇಲೆ ಬರೆಯುತ್ತಾ ಇದ್ದರು.
7ಅವರು ಬಿಡದೆ ಪ್ರಶ್ನೆಗಳನ್ನು ಕೇಳುತ್ತಿರಲು ಯೇಸು ನೆಟ್ಟಗೆ ಕುಳಿತುಕೊಂಡು, “ನಿಮ್ಮಲ್ಲಿ ಪಾಪವಿಲ್ಲದವನು ಯಾರಿದ್ದಾನೋ ಅವನೇ ಮೊದಲು ಇವಳ ಮೇಲೆ ಕಲ್ಲು ಎಸೆಯಲಿ,” ಎಂದು ಅವರಿಗೆ ಹೇಳಿದರು. 8ತಿರುಗಿ ಯೇಸು ಬಗ್ಗಿಕೊಂಡು ನೆಲದ ಮೇಲೆ ಬರೆಯತೊಡಗಿದರು.

9 ಅದನ್ನು ಅವರು ಕೇಳಿ ಹಿರಿಯರು ಮೊದಲುಗೊಂಡು ಕಿರಿಯರವರೆಗೂ ಒಬ್ಬೊಬ್ಬರಾಗಿ ಹೊರಟು ಹೋದರು; ಆಗ ಯೇಸು ಒಬ್ಬರೇ ಉಳಿದರು. ಆ ಸ್ತ್ರೀಯು ಅಲ್ಲಿಯೇ ನಿಂತಿದ್ದಳು. 10ಯೇಸು ನೆಟ್ಟಗೆ ಕುಳಿತುಕೊಂಡು ಆಕೆಗೆ, “ಅಮ್ಮಾ ಅವರು ಎಲ್ಲಿದ್ದಾರೆ? ನಿನಗೆ ಯಾರೂ ಶಿಕ್ಷೆ ವಿಧಿಸಲಿಲ್ಲವೋ?” ಎಂದರು.

11 ಅದಕ್ಕೆ ಆಕೆಯು, “ಸ್ವಾಮಿ, ಯಾರೂ ಶಿಕ್ಷೆ ವಿಧಿಸಲಿಲ್ಲ,” ಎಂದಳು.

ಯೇಸು ಆಕೆಗೆ, “ನಾನೂ ನಿನಗೆ ಶಿಕ್ಷೆ ವಿಧಿಸುವುದಿಲ್ಲ, ಹೋಗು; ಇನ್ನು ಮೇಲೆ ಪಾಪ ಮಾಡಬೇಡ,” ಎಂದರು.
ಕೆಲವು ಮೂಲ ಪ್ರತಿಗಳಲ್ಲಿ ಯೋಹಾನ 7:53–8:11 ವಾಕ್ಯ ಸೇರ್ಪಡೆಯಾಗಿರುವುದಿಲ್ಲ.
Copyright information for KanKSB