Numbers 22:28-35
28ಆಗ ಯೆಹೋವ ದೇವರು ಕತ್ತೆಗೆ ಮಾತಾಡುವ ಶಕ್ತಿಯನ್ನು ಕೊಟ್ಟರು. ಅದು ಬಿಳಾಮನಿಗೆ, “ಈಗ ನನ್ನನ್ನು ಮೂರು ಸಾರಿ ಹೊಡೆಯುವ ಹಾಗೆ ನಾನು ನಿನಗೆ ಏನು ಮಾಡಿದೆನು?” ಎಂದು ಕೇಳಿತು. 29ಬಿಳಾಮನು ಕತ್ತೆಗೆ, “ನೀನು ನನಗೆ ಹಾಸ್ಯಮಾಡಿದೆಯಲ್ಲಾ? ನನ್ನ ಕೈಯಲ್ಲಿ ಖಡ್ಗ ಇದ್ದಿದ್ದರೆ, ನಾನು ಈಗಲೇ ನಿನ್ನನ್ನು ಕೊಂದು ಹಾಕುತ್ತಿದ್ದೆ,” ಎಂದನು. 30ಕತ್ತೆಯು ಬಿಳಾಮನಿಗೆ, “ಈ ದಿವಸದವರೆಗೂ ನೀನು ಯಾವಾಗಲೂ ಸವಾರಿಮಾಡುತ್ತಿದ್ದ ಕತ್ತೆಯು ನಾನಲ್ಲವೋ? ನಾನು ಎಂದಾದರೂ ನಿನಗೆ ಈ ರೀತಿ ಮಾಡಿದೆನೋ?” ಎಂದು ಪ್ರಶ್ನಿಸಿತು. ಅದಕ್ಕವನು, “ಇಲ್ಲ,” ಎಂದನು. 31ಆಗ ಯೆಹೋವ ದೇವರು ಬಿಳಾಮನ ಕಣ್ಣುಗಳನ್ನು ತೆರೆದರು. ಅವನು ಮಾರ್ಗದಲ್ಲಿ ನಿಂತಿದ್ದ ಯೆಹೋವ ದೇವರ ದೂತನನ್ನೂ, ಆತನ ಕೈಯಲ್ಲಿರುವ ಬಿಚ್ಚುಗತ್ತಿಯನ್ನೂ ನೋಡಿ ಬೋರಲು ಬಿದ್ದನು. 32ಯೆಹೋವ ದೇವರ ದೂತನು ಅವನಿಗೆ, “ನಿನ್ನ ಕತ್ತೆಯನ್ನು ಈಗ ಮೂರು ಸಾರಿ ಹೊಡೆದದ್ದು ಏಕೆ? ಇಗೋ, ನಿನ್ನ ಮಾರ್ಗವು ನನ್ನ ಮುಂದೆ ವಕ್ರವಾಗಿರುವುದರಿಂದ ನಾನು ನಿನ್ನನ್ನು ತಡೆಯುವುದಕ್ಕೆ ಬಂದಿದ್ದೇನೆ. 33ಆ ಕತ್ತೆ ನನ್ನನ್ನು ನೋಡಿ, ನನ್ನ ಮುಂದೆ ಈಗ ಮೂರು ಸಾರಿ ಓರೆಯಾಗಿ ಹೋಯಿತು. ಅದು ನನ್ನ ಮುಂದೆ ಓರೆಯಾಗಿ ಹೋಗದಿದ್ದರೆ, ನಿಶ್ಚಯವಾಗಿ ಆಗಲೇ ನಿನ್ನನ್ನು ಕೊಂದುಹಾಕಿ ಕತ್ತೆಯನ್ನು ಉಳಿಸುತ್ತಿದ್ದೆನು,” ಎಂದನು. 34ಆಗ ಬಿಳಾಮನು ಯೆಹೋವ ದೇವರ ದೂತನಿಗೆ, “ನಾನು ಪಾಪಮಾಡಿದ್ದೇನೆ. ನೀನು ನನಗೆದುರಾಗಿ ಮಾರ್ಗದಲ್ಲಿ ನಿಂತಿದ್ದಿ ಎಂದು ನನಗೆ ತಿಳಿಯಲಿಲ್ಲ. ಹೀಗಿರಲಾಗಿ ಅದು ನಿನ್ನ ದೃಷ್ಟಿಯಲ್ಲಿ ಕೆಟ್ಟದ್ದಾದರೆ, ನಾನು ತಿರುಗಿ ಹಿಂದಕ್ಕೆ ಹೋಗುತ್ತೇನೆ,” ಎಂದನು. 35ಆದರೆ ಯೆಹೋವ ದೇವರ ದೂತನು ಬಿಳಾಮನಿಗೆ, “ಈ ಮನುಷ್ಯರ ಸಂಗಡ ಹೋಗು ಆದರೆ ನಾನು ನಿನಗೆ ಹೇಳುವುದನ್ನೇ ಹೇಳಬೇಕೇ ಹೊರತು ಬೇರೆ ಯಾವದನ್ನೂ ಹೇಳಬಾರದು,” ಎಂದನು. ಹಾಗೆಯೇ ಬಿಳಾಮನು ಬಾಲಾಕನ ಪ್ರಭುಗಳ ಸಂಗಡ ಹೋದನು.
Copyright information for
KanKSB